Sep 27, 2018 : ಸಂತ ಅಂತೋನಿ ಪದವಿ ಹಾಗೂ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳ ಹೆತ್ತವರ ಸಭೆಯು ಇತ್ತೀಚೆಗೆ ಸಂತ ಮದರ್ ತೆರೇಜ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಿಕ್ಷಣ ಸಂಸ್ಥೆಗಳ ಸಂಚಾಲಕರಾದ ವಂದನೀಯ ಸ್ವಾಮಿ ಸೈಮನ್ ಡಿ’ಸೋಜರವರು ವಹಿಸಿದ್ದರು. ಸಂಪನ್ಮೂಲ ವ್ಯಕ್ತಿಗಳಾಗಿ ಫಾ| ಮುಲ್ಲರ್ ಹೋಮಿಯೋಪತಿ ಆಸ್ಪತ್ರೆಯ ಆಡಳಿತಾಧಿಕಾರಿಗಳಾದ ವಂದನೀಯ ಸ್ವಾಮಿ ವಿನ್ಸೆಂಟ್ ಸಲ್ಡಾನ್ಹಾ ಆಗಮಿಸಿ, ವಿದ್ಯಾರ್ಥಿಗಳ ಭವಿಷ್ಯ ಬೆಳಗಬೇಕಾದರೆ ಅಂಕಗಳೊಂದಿಗೆ ಕೌಶಲ್ಯ ಮುಖ್ಯ. ಗುಣಮಟ್ಟದ ಶಿಕ್ಷಣ ಮತ್ತು ಹೆತ್ತವರ ಕಾಳಜಿ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ಹೆತ್ತವರು ತಮ್ಮ ಮಕ್ಕಳಿಗೆ ಶಿಕ್ಷಣದೊಂದಿಗೆ ಮೌಲ್ಯವನ್ನು ಕಲಿಸಬೇಕಾಗುತ್ತದೆ ಎಂದು ತಿಳಿಸಿದರು. ಕಾಲೇಜಿನ ಪ್ರಾಂಶುಪಾಲರಾದ ವಂದನೀಯ ಸ್ವಾಮಿ ಅರುಣ್ ವಿಲ್ಸನ್ ಲೋಬೊ ಪ್ರಾಸ್ತಾವಿಕ ಮಾತುಗಳನ್ನಾಡಿದರು. ವೇದಿಕೆಯಲ್ಲಿ ಕಾಲೇಜಿನ ಉಪಪ್ರಾಂಶುಪಾಲರಾದ ಶ್ರೀ ಸಂತೋಷ್ ಸಲ್ಡಾನ್ಹಾ, ಕಾಲೇಜು ಆಡಳಿತ ಮಂಡಳಿಯ ಸದಸ್ಯರಾದ ಶ್ರೀ ಸಂಜಯ್ ಮಿರಾಂದ, ಉಪನ್ಯಾಸಕರಾದ ಶ್ರೀಮತಿ ಛಾಯಾ ಹಾಗೂ ಶ್ರೀಮತಿ ಜ್ಯೋತಿ ಹೆಗ್ಡೆ ಉಪಸ್ಥಿತರಿದ್ದರು.
ಉಪನ್ಯಾಸಕರಾದ ಶ್ರೀ ರಿಚ್ಚಾರ್ಡ್ ಮೋರಾಸ್ ಸ್ವಾಗತಿಸಿ, ಶ್ರೀಮತಿ ಛಾಯಾ ವಂದಿಸಿದರು. ಶ್ರೀ ದಿನೇಶ್ ಬಿ.ಕೆ ಕಾರ್ಯಕ್ರಮ ನಿರೂಪಿಸಿದರು.