ನಾರಾವಿ
ಮಲೆನಾಡ ಮಡಿಲಲ್ಲಿ ಅಭಿವೃದ್ಧಿ ಹೊಂದುತ್ತಿರುವ ನಾರಾವಿ ಎಂಬ ಈ ಹಳ್ಳಿಯು ಅತ್ಯಂತ ಹಿಂದುಳಿದ ಮಲೆನಾಡ ಪ್ರದೇಶಗಳಲ್ಲಿ ಒಂದೆನಿಸಿತ್ತು. ಪ್ರಕೃತ ಪ್ರಗತಿ ಪಥದಲ್ಲಿರುವ ಈ ಹಳ್ಳಿಯು ಅನಾದಿ ಕಾಲದಿಂದಲೂ ಮಳೆಗಾಲದ ಆರು ತಿಂಗಳು ಹೊರನಾಡುಗಳೊಡನೆ ಸಂಪರ್ಕ ಕಳೆದುಕೊಂಡ ಅಂಡಮಾನದಂತೆ ಇರಬೇಕಾಗಿತ್ತು. ಕಾರಣ ಈ ಊರಿಗೆ ಬರಲಿರುವ ರಸ್ತೆಗಳಿಗೆ ಅಡ್ಡವಾಗಿರುವ ಹೊಳೆಗಳಿಗೆ ಸೇತುವೆಯೇ ಇರಲಿಲ್ಲ. ಈಗೀಗ ನಾರಾವಿಯು ಅಂಡಮಾನವೆನ್ನುವ ಮಾತು ಮಾಯವಾಗುತ್ತಿದೆ.
ಈ ನಾರಾವಿಯು ಕಾರ್ಕಳ - ಹೊಸ್ಮಾರು - ಬೆಳ್ತಂಗಡಿ ರಸ್ತೆಯ ಬದಿಯಲ್ಲಿ ಕಾರ್ಕಳ, ಮೂಡಬಿದ್ರೆ, ಬೆಳ್ತಂಗಡಿಗಳಿಂದ 14 ಮೈಲು ಮತ್ತು ವೇಣೂರಿನಿಂದ 11 ಮೈಲು ಅಂತರದಲ್ಲಿರುವ ಒಂದು ಚಿಕ್ಕ ಹಳ್ಳಿ, ಪಟ್ಟಣವೆನಿಸಿದೆ. ಬೆಳ್ತಂಗಡಿ ತಾಲೂಕಿನಲ್ಲಿದ್ದು ಬೆಳ್ತಂಗಡಿ, ಕಾರ್ಕಳ ತಾಲೂಕುಗಳ ಗಡಿ ಗ್ರಾಮವೆನಿಸಿದೆ. ನಾರಾವಿ ಪೇಟೆಯಿಂದ ಸುಮಾರು ಒಂದೂವರೆ ಮೈಲು ದೂರದಲ್ಲಿ ಒಂದು ಇಗರ್ಜಿಯಿದೆ. ಈ ಇಗರ್ಜಿಯ ವಠಾರದಲ್ಲಿ ಸುಮಾರು ಅರುವತ್ತು ವರ್ಷಗಳಿಂದೀಚೆಗೆ ನಡೆದ ಬದಲಾವಣೆಗಳು ನಿಜವಾಗಿಯೂ ಹೊಗಳಲರ್ಹವಾಗಿವೆ. ಈ ಬದಲಾವಣೆಗಳು ಅನೇಕ ಕ್ರೈಸ್ತ ಮಿಶನರಿಗಳ ಸತತ ಪ್ರಯತ್ನದ ಫಲವಾಗಿದೆ. ಈ ಬದಲಾವಣೆಗಳು ದೂರ ದೂರದ ಪ್ರೇಕ್ಷಕರನ್ನು ತನ್ನೆಡೆಗೆ ಆಕರ್ಷಿಸಲು ಕಾರಣವಾಗಿವೆ.
ಸುಮಾರು 1870ರಲ್ಲಿ ನಾರಾವಿಯಲ್ಲೊಂದು ‘ಚಾಪಲ್’ ಮತ್ತು ಸಂದರ್ಶನ ಮನೆಯನ್ನು ಕಟ್ಟಲಾಯ್ತು. ಈ ಚಾಪಲ್ ಸಂತ ಅಂತೋನಿಯವರಿಗೆ ಸಮರ್ಪಿಸಲಾಯಿತು. 1905ರಲ್ಲಿ ಸೈಂಟ್ ಎಲೋಸಿಯಸ್ ಕಾಲೇಜಿನ ಪ್ರೊಫೆಸರರಾದ ಋಎ| ಫಾ| ಕೋರ್ಟಿಯವರು ನಾರಾವಿಯನ್ನು ಸಂದರ್ಶಿಸಿದರು. ಇಲ್ಲಿಯ ಜನರ ಬೀಕರ ಸ್ಥಿತಿಯನ್ನು ಕಂಡು ಅವರ ಮನಸ್ಸು ಕರಗಿತು. 1910ರಲ್ಲಿ ನಾರಾವಿಗೆ ಸಂದರ್ಶಿಸಿದ ಇನ್ನೋರ್ವ ಕ್ರೈಸ್ತ ಮಿಶನರಿ ರೆ| ಫಾ| ಕಾಮಿಸ್ಸಾರವರ ಉಪದೇಶದ ಮೇರೆಗೆಕೊರಗರಿಗೆ ಕ್ರೈಸ್ತರ ತತ್ವಗಳನ್ನು ಬೋಧಿಸಲಾರಂಭಿಸಿದರು. ಅನೇಕ ಕೊರಗರು ಕ್ರೈಸ್ತ ಮತಾವಲಂಭಿಸಿದರು 1911, ಅಕ್ಟೋಬರ್ 4ರಂದು ನಾರಾವಿಗೆ ಸಂದರ್ಶನವನ್ನಿತ್ತ ಬಿಷಪ್ ಪೆರಿನಿಯವರು ನಾರಾವಿಯಲ್ಲಾದ ಬದಲಾವಣೆಗಳನ್ನು ನೋಡಿ ಅತ್ಯಾನಂದಪಟ್ಟರು. ಫಾದರ್ ಕೋರ್ಟಿಯವರ ಪ್ರಯತ್ನವನ್ನು ಶ್ಲಾಘಿಸಿದರು. ಅಲ್ಲದೆ ಹಗಲು ರಾತ್ರಿಯೆನ್ನದೆ ಕೊರಗರ ಉದ್ಧಾರಕ್ಕೆ ದುಡಿಯುವ ಈ ಕ್ರೈಸ್ತ ಮಿಶನರಿಯ ಪ್ರಯತ್ನ ಹಾಗೂ ನಿಸ್ವಾರ್ಥವನ್ನು ಕಂಡ ಸಿವಿಲ್ ಸರಕಾರವು ಅವರಿಗೆ “ಕೈಸರಿ ಹಿಂದ್” ಬಿರುದನ್ನು ಕೊಟ್ಟರು.
1913ರಲ್ಲಿ ರೆ| ಫಾ| ಗವಿರಾಗಿ ಎಂಬ ಇನ್ನೊಬ್ಬ ಮಿಶನರಿಯು ಫಾದರ್ ಕೋರ್ಟಿಯವರಿಗೆ ಸಹಾಯಕರಾಗಿ ನೇಮಕರಗೊಂಡರು. ಆದರೆ ಕೆಲವೇ ದಿನಗಳಲ್ಲಿ ಫಾದರ್ ಗವಿರಾಗಿಯವರು ಅಳದಂಗಡಿ ಸ್ಟೇಶನ್ನಿಗೆ ಮಿಶನರಿಯಾಗಿ ತೆರಳಿದರು. ಫಾದರ್ ಕೋರ್ಟಿಯವರನ್ನು ಸಂದರ್ಶಿಸುವ ಜನರ ಸಂಖ್ಯೆಯು ಹೆಚ್ಚಾದ ನಿಮಿತ್ತದಿಂದ ಸಣ್ಣದಾದ ಸಂದರ್ಶನ ಮನೆಯನ್ನು ದೊಡ್ಡದಾದ ಬಂಗ್ಲೆಯಾಗಿ ಕಟ್ಟಲಾಯ್ತು. 1918ರಲ್ಲಿ ರೆ| ಫಾ| ಜಿಯಾರೋ ಎಂಬ ಮಿಶನರಿಯನ್ನು ಫಾದರ್ ಕೋರ್ಟಿಯವರಿಗೆ ಸಹಾಯಕರಾಗಿ ಕಳುಹಿಸಲಾಯ್ತು. ಕ್ರೈಸ್ತ ಜನರ ಸಂಖ್ಯೆಯು ಏರಿದುದರಿಂದ ಸಣ್ಣದಾದ ಚಾಪಲ್ ಸಾಕಾಗದೆ ಹೊಸತಾದ ಇಗರ್ಜಿಯನ್ನು ಕಟ್ಟುವ ಆಲೋಚನೆಯು ಫಾದರ್ ಕೋರ್ಟಿಯವರಿಗೆ ಮೂಡಿತು. ಇದರಂತೆ 1923ರಲ್ಲಿ ರೆ| ಫಾ| ಜಿಯಾರೋರವರ ಸತತ ಪ್ರಯತ್ನದಿಂದ ಹೊಸ ಇಗರ್ಜಿಗೆ ಬುನಾದಿಯನ್ನು ಹಾಕಲಾಯ್ತು. ಆದರೆ ಅನಾನುಕೂಲತೆಯಿಂದ ಇದರ ಕೆಲಸವನ್ನು 1929ಕ್ಕೆ ಮುಂದೂಡಲಾಯ್ತು. ಹೀಗೆ ತನ್ನ ಸ್ವಾಸ್ಥ್ಯವನ್ನು ಲೆಕ್ಕಿಸದೆ ಕೆಲಸಮಾಡಿದ ಮತ್ತು 21 ವರ್ಷಗಳ ಕಾಳ ತನ್ನ ಅಪ್ಪಟ ಸೇವೆಯನ್ನು ಸಲ್ಲಿಸಿದ ಫಾದರ್ ಕೋರ್ಟಿಯವರು 1926 ಅಕ್ಟೋಬರ್ 9ರಂದು ನಿಧನರಾದರು.
ಫಾದರ್ ಕೋರ್ಟಿಯವರ ಮರಣದಿಂದ ಧೈರ್ಯಗೆಡದೆ ಫಾದರ್ ಜಿಯಾರೋರವರು ಎಲ್ಲಾ ಕೆಲಸಗಳನ್ನೂ ಸುಸೂತ್ರವಾಗಿ ನಡೆಸಲಾರಂಭಿಸಿದರು. ಆದರೆ ಹತ್ತು ವರ್ಷಗಳ ಅನಂತರ 1928ರಲ್ಲಿ ಅವರು ಕಲ್ಕತ್ತಕ್ಕೆ ವರ್ಗಾಯಿಸಲ್ಪಟ್ಟರು. ಇದರ ಅನಂತರ ಅಳದಂಗಡಿ ಮತ್ತು ‘ಬದ್ಯಾರಿನ’ ಮಿಶನರಿ, ಫಾದರ್ ಗವಿರಾಗಿಯವರು ನಾರಾವಿಗೆ ಬಂದರು. ಫಾದರ್ ಜಿಯಾರೋರವರು ಬುನಾದಿ ಹಾಕಿದ ಇಗರ್ಜಿಯ ಕೆಲಸವನ್ನು 1929ರಲ್ಲಿ ಆರಂಭಿಸಿದರು. ಇಂತಹ ಮಲೆನಾಡಿನಲ್ಲಿ ಬೇರೆ ಸ್ಥಳಗಳ ಸಂಪರ್ಕವಿಲ್ಲದಲ್ಲಿ ಬೇಕಾದ ಸಾಮಾಗ್ರಿಗಳು ದೊರೆಯುವುದು ಕಷ್ಟವೇ ಸರಿ. ಆದರೂ ಧೈರ್ಯಗೆಡದೆ ಒಂದೇ ವರುಷದೊಳಗೆ ಇದರ ಕೆಲಸವನ್ನು ಮುಗಿಸಿ 1930 ಮೇ 7ರಂದು ವಿಕಾರ್ ಜನರಲ್ ವಿ. ಆರ್. ಫೆರ್ನಾಂಡಿಸರಿಂದ ಆಶೀರ್ವದಿಸಲ್ಪಟ್ಟಿತು. ಹಳೆಯ ಚಾಪಲನ್ನು ಶಾಲೆಯಾಗಿ ಮಾಡಲಾತು. 1930ರಲ್ಲಿಯೇ ಫಾದರ್ ಗವಿರಾಗಿಯವರಿಗೆ ಹರಿಜನೋಧ್ಧಾರ ಕಾರ್ಯದಲ್ಲಿ ಸಹಾಯಕರಾಗುವಂತೆ ರೆ| ಫಾ| ಲಿಗರಿ ಲೋಬೋರವರನ್ನು ನೇಮಿಸಲಾಯ್ತು. ಕೆಲವೇ ಸಮಯದಲ್ಲಿ ರೆ| ಫಾ| ಕೇಸ್ಟಲೀನೋರವರು ಫಾದರ್ ಲೋಬೊರವರ ಸ್ಥಾನವನ್ನು ಭರ್ತಿಮಾಡಿದರು. 1933ರಲ್ಲಿ ರೆ| ಫಾ| ಯಫ್. ಯಕ್ಸ್. ಡಿ’ಸೋಜರವರು ಫಾದರ್ ಗವಿರಾಗಿಯವರ ಸಹಾಯಕರಾಗಿ ಬಂದರು. ನಾರಾವಿಯ ಇನ್ನೂ ಹೆಚ್ಚಿನ ಅಭಿವೃದ್ಧಿಯನ್ನು ಸಾಧಿಸುವ ಸಲುವಾಗಿ ಶಾಲೆಯಲ್ಲಿ ಕಲಿಸಲು ಮತ್ತಿತರ ಕೆಲಸಗಳಿಗಾಗಿ ಸಿಸ್ಟರರನ್ನು ತರಿಸುವ ಆಲೋಚನೆಯಿಂದ ಇಗರ್ಜಿಯ ಎದುರು ಇರುವ ಗುಡ್ಡೆಯ ಮೇಲೆ ಒಂದು ವಾಸಸ್ಥಳದ ಕಟ್ಟಡವನ್ನು ಕಟ್ಟಿಸಿ 1932ನೇ ಎಪ್ರಿಲ್ 2ರಂದು ಅದು ಆಶೀರ್ವದಿಸಲ್ಪಟ್ಟಿತು. ಸುಮಾರು ಒಂದು ವರುಷದ ಅನಂತರ ಮೂರು ಸಿಸ್ಟರ್ಸ್ ಬಂದು ಶಾಲೆಯಲ್ಲಿ ಕಲಿಸಲಾರಂಭಿಸಿದರು.
ಫಾದರ್ ಗವಿರಾಗಿಯವರ ಆಕಾಂಕ್ಷೆಯು ಇಲ್ಲಿಗೆ ಮುಗಿಯಲಿಲ್ಲ. ಇನ್ನೂ ಕೆಲವು ಸ್ಥಳಗಳ ಜನರ ಸೇವೆಯನ್ನು ಬಯಸಿದ ಅವರು ನಾರಾವಿಯನ್ನು ಬಿಟ್ಟು ನೆಲ್ಲಿಕಾರಿಗೆ ತೆರಳಿದರು. 1937 ಮೇ 10ರಂದು ರೆ| ಫಾ| ಪಿ. ಪಂಟೋರವರು ಫಾದರ್ ಡ’ಸೋಜರವರ ಸ್ಥಾನವನ್ನು ಅಂಗೀಕರಿಸಿದರು. ಇವರು ಶಾಲೆಯ ಮುಂದುಗಡೆ ಒಂದು ಸುಂದರವಾದ ಹೂತೋಟವನ್ನು, ಕೆಲವು ಮಾವಿನ ಮರಗಳನ್ನು ನೆಡಿಸಿದರು. 1940 ಮೇ 26ರಂದು ಫಾದರ್ ಪಿಂಟೋರವರ ಸ್ಥಾನಕ್ಕೆ ರೆ| ಫಾ| ಜೆ. ಬಿ. ಅಲ್ವಾರಿಸ್ರವರು ನೇಮಿಸಲ್ಪಟ್ಟರು. 1944ರಲ್ಲಿ ಬಿಶಪ್ ವಿ. ಆರ್. ಫೆರ್ನಾಂಡಿಸರು ನಾರಾವಿಯನ್ನು ಸಂದರ್ಶಿಸಿದಾಗ, ಅವರಿಗೆ ಇದು ಹದಿನಾಲ್ಕು ವರ್ಷಗಳ ಹಿಂದೆ ಇದ್ದ ನಾರಾವಿಯೇ ಎಂಬುದನ್ನು ಊಹಿಸಲು ಕಷ್ಟವಾಯ್ತು. ಇಗರ್ಜಿಯ ವಠಾರದಲ್ಲಾದ ಮಹತ್ ಬದಲಾವಣೆಗಳನ್ನು ನೋಡಿ ಪರಮಾನಂದ ಪಟ್ಟರು. ಇದರ ಕಾರಣಕರ್ತರ ನಿಸ್ವಾರ್ಥ ಸೇವೆಯನ್ನು ಶ್ಲಾಘಿಸಿದರು. 1945ರಲ್ಲಿ ಅಕ್ಟೋಬರ್ ತಿಂಗಳೀನಲ್ಲಿ ಹೊಸ ಶಾಲಾ ಕಟ್ಟಡಕ್ಕೆ ಬುನಾದಿಯನ್ನು ಹಾಕಲಾಯ್ತು ಮತ್ತು ಒಂದು ವರುಷದೊಳಗೆ ಅದರ ಕೆಲಸವು ಮುಕ್ತಾಯವಾಯ್ತು. ಇದರಿಂದ ಇನ್ನೂ ಹೆಚ್ಚಿನ ಬಡ ಮಕ್ಕಳಿಗೆ ಸುಲಭವಾಗಿ ಶಿಕ್ಷವು ದೊರೆಯಲು ಸಾಧ್ಯವಾಯ್ತು. ಅನಾಥ ಹಾಗೂ ಬಡ ಮಕ್ಕಳ ಉದ್ಧಾರವು ಅಗತ್ಯವೆಂದು ಮನಗಂಡ ಫಾದರ್ ಅಲ್ವಾರಿಸ್‍ರವರು ಶಿಶುನಿಲಯದ ಉದ್ದೇಶದಿಂದ ಇಗರ್ಜಿಯ ಮುಂದುಗಡೆ ಒಂದು ಕಟ್ಟಡದ ಬುನಾದಿಯನ್ನು 1946 ಸಪ್ಟೆಂಬರ್ ತಿಂಗಳಲ್ಲಿ ಹಾಕಿದರು. ಇದರ ಕೆಲಸವು ಮೂರು ತಿಂಗಳಲ್ಲಿ ಮುಕ್ತಾಯವಾಯ್ತು.
1953 ಮೇ 19ರಂದು ಫಾದರ್ ಅಲ್ವಾರಿಸ್‍ರವರು ವರ್ಗಾಯಿಸಲ್ಪಟ್ಟು, ಫಾದರ್ ಪಿ. ಎಫ್. ಫೆರ್ನಾಂಡಿಸ್‍ರವರು ನಾರಾವಿಯ ಗುರುಗಳಾಗಿ ನೇಮಕಗೊಂಡರು. ನಾರಾವಿಯಲ್ಲಾದ ಮುಖ್ಯವಾದ ಕೆಲಸಗಳಾದ 7ನೇ ತರಗತಿ: ಮತ್ತು ಹೈಸ್ಕೂಲಿಗೆ ಕಾರಣಕರ್ತರಾದ ಇವರ ಕೆಲಸವು ನಿಜವಾಗಿಯೂ ನಾರಾವಿಯ ಅಭಿವೃದ್ಧಿಯಲ್ಲಿ ಗಮನಾರ್ಹ ವಿಷಯವಾಗಿದೆ. ತನ್ನ ತನು, ಮನ ಮತ್ತು ಧನವನ್ನು ನಾರಾವಿಯ ಏಳಿಗೆಗೋಸ್ಕರ ಅರ್ಪಿಸಿದ ಅವರ ಕೆಲಸವು ಹೊಗಳಲು ಯೋಗ್ಯವಾಗಿದೆ. ನಾರಾವಿಯ ಜನರ ಬಡ ಸ್ಥಿತಿಯನ್ನು ಕಂಡು, ಉದ್ಯೋಗವನ್ನು ಕಲ್ಪಿಸಿಕೊಡುವುದೇ ಇವರ ಉದ್ಧಾರದ ದಾರಿಯೆಂದು ನಿರ್ಧರಿಸಿದರು. ಈ ಉದ್ಧಶವನ್ನು ಮುಂದಿಟ್ಟು ಇಗರ್ಜಿಯ ಪೂರ್ವ ಭಾಗಕ್ಕಿರುವ ದಟ್ಟವಾದ ಕಾಡನ್ನು ಕಡಿದು ಸಾವಿರಕ್ಕೂ ಮಿಕ್ಕಿ ಅನಾನಸು ಗಿಡಗಳನ್ನು ನೆಡಿಸಿದರು. ಅಲ್ಲದೆ ಉತ್ತರಕ್ಕಿರುವ ಗಿಡ ಪೊದರುಗಳನ್ನು ನಾಶಮಾಡಿ ಅಲ್ಲಿಯೂ ಬಾಳೆಗಿಡ, ಅನಾನಸು ಗಿಡಗಳನ್ನು ನೆಡಿಸಿದರು. ಇಗರ್ಜಿಯ ಗೇಟಿನ ಮುಂಬಾಗಕ್ಕಿರುವ ಬಂಜರು ಭೂಮಿಯನ್ನು ಫಲವತ್ತಾದ ಮತ್ತು ಧಾರಾಳವಾಗಿ ಫಲವನ್ನೀಯುವ ಗದ್ದೆಗಳನ್ನಾಗಿ ಮಾಡಿ, ಅದಕ್ಕೆ ನೀರಾವರಿಗಾಗಿ ಒಂದು ಕೆರೆಯನ್ನು ತೋಡಿಸಿದರು. ಈ ಎಲ್ಲಾ ಕೆಲಸಗಳು ಫಾದರ್ ಫೆರ್ನಾಂಡಿಸರ ಉದ್ದೇಶವಾದ ನಿರುದ್ಯೋಗ ಸಮಸ್ಯೆಯನ್ನು ಆದಷ್ಟು ಕಡಿಮೆ ಮಾಡಲು ಸಮರ್ಥವಾದುವು ಎಂಬುದಕ್ಕೆ ಸಂದೇಹವಿಲ್ಲ.
1953ರಲ್ಲಿ ಶಿಶುನಿಲಯದ ಕಟ್ಟಡವನ್ನು ವೃದ್ಧಿಸಿದುದರ ಫಲವಾಗಿ 25 ಜನ ಅನಾಥ ಮಕ್ಕಳಿಗೆ ಊಟ ಹಾಗೂ ವಸತಿಯನ್ನು ಕಲ್ಪಿಸಲು ಸಾಧ್ಯವಾಯ್ತು. ಇಲ್ಲಿಗೆ ಬಂದು 23 ವರ್ಷ ಸಂದರೂ ಸಿಸ್ಟರ್ಸ್‍ಗಳಿಗೊಂದು ಚಾಪಲ್ ಇನ್ನೂ ಕಟ್ಟಿಸಿಲ್ಲದನ್ನು ಕಂಡು ಫಾದರ್ ಫೆರ್ನಾಂಡಿಸ್‍ರವರು 1957ರಲ್ಲಿ ಒಂದು ಸುಂದರವಾದ ಚಾಪಲನ್ನು ಕಾನ್ವೆಂಟಿನ ಹತ್ತಿರವೇ ಕಟ್ಟಿಸಿದರು. ಇದನ್ನು ಆಗಿನ ಬಿಷಪರಾದ ರೆ| ಡಾ| ಬೇಸಿಲ್ ಪೇರಿಸರು 1957ನೇ ಏಪ್ರಿಲ್ 14ರಂದು ಆಶೀರ್ವದಿಸಿದರು ಮತ್ತು ಅದನ್ನು ಸಂತ ಜರೋಸಾರವರಿಗೆ ಸಮರ್ಪಿಸಲಾಯ್ತು. ಶಿಶು ನಿಲಯದ ಮಕ್ಕಳ ಸಂಖ್ಯೆಯು ಶೀಘ್ರವಾಗಿ ಏರಿದುದರಿಂದಾಗಿ ಗಂಡು ಮತ್ತು ಹೆಣ್ಣು ಮಕ್ಕಳ ಶಿಶುನಿಲಯಗಳನ್ನು ಬೇರೆ ಬೇರೆಯಾಗಿ ಮಾಡುವ ಅಭಿಪ್ರಾಯದಿಂದ 16ನೇ ಆಗಸ್ಟ್ 1958ರಂದು ಬೇರೊಂದು ಕಟ್ಟಡಕ್ಕೆ ಬುನಾದಿಯನ್ನು ಹಾಕಲಾಯ್ತು. ಇದರ ಕೆಲಸವು ಮುಕ್ತಾಯವಾಗಿ ಇನ್ನಷ್ಟು ಮಕ್ಕಳು ಆಶ್ರಯ ಪಡೆಯುವಂತಾಯ್ತು.
ಇಲ್ಲಿಗೇ ಫಾದರ್ ಫೆರ್ನಾಂಡಿಸ್‍ರವರ ಮಹತ್ವಾಕಾಂಕ್ಷೆ ಮುಗಿಯಲಿಲ್ಲ. ಆರನೇ ತರಗತಿಗೆ ಪರ್ಮಿಶನ್ ಪಡೆದು ಬೇಕಾದ ಹೊಸ ಕಟ್ಟಡಕ್ಕೆ 1961ರಂದು ಬುನಾದಿಯನ್ನು ಹಾಕಲಾಯ್ತು ಮತ್ತು ಬಿಶಪ್ ಆರ್. ಡಿ’ಮೆಲ್ಲೊರವರಿಂದ ಇದರ ಉದ್ಘಾಟನೆಯೂ ಆಯಿತು. ಅಲ್ಲದೇ ಅದೇ ವರುಷ 7ನೇ ತರಗತಿಯು ಪ್ರಾರಂಭವಾಯಿತು. ಶಾಲಾ ಏಳಿಗೆಯ ಶಭ ಸೂಚನೆಯೋ ಎಂಬಂತೆ 1963ರಲ್ಲಿ ಪರೀಕ್ಷೆಗೆ ಕುಳಿತ ಮೊದಲನೇ ಬ್ಯಾಚ್ 100% ಫಲಿತಾಂಶವನ್ನು ತಂದು ನಾರಾವಿಯ ಹೆಸರನ್ನು ಇನ್ನೂ ಬೆಳಗಿಸಿತು. ಶಾಲಾ ಕಟ್ಟಡ, ಏಳನೇ ತರಗತಿಯ ಫಲಿತಾಂಶ, ಮಕ್ಕಳ ಸಂಖ್ಯೆ ಹಾಗೂ ಶಾಲಾ ಸರ್ವತೋಮುಖ ಏಳಿಗೆಯನ್ನು ಕಂಡ ಜಿಲ್ಲಾ ವಿದ್ಯಾಧಿಕಾರಿಗಳು ಈ ಶಾಲೆಗೆ ರೋಲಿಂಗ್ ಶೀಲ್ಡನ್ನು ಕೊಟ್ಟರು. 7ನೇ ತರಗತಿಯಿಂದ ಪಾಸಾಗಿ ಹೊರಬಂದ ವಿದ್ಯಾರ್ಥಿಗಳು ಮುಂದಿನ ವಿದ್ಯೆಗಾಗಿ ವೇಣೂರಿಗೋ, ಶಿರ್ತಾಡಿಗೋ ಅಥವಾ ಇನ್ನಿತರ ದೂರದ ಶಾಲೆಗಳಿಗೆ ಹೋಗಬೇಕಾಗಿತ್ತು. ಇದನ್ನು ಮನಗಂಡ ಫಾದರ್ ಫೆರ್ನಾಂಡಿಸರಿಗೆ, ಇದು ಸರಿಯಲ್ಲ, ಇಲ್ಲಿ ಒಂದು ಹೈಸ್ಕೂಲ್ ಬೇಕು ಎಂದು ಕಂಡುಬಂತು. ಆಗಲೇ ಬೇಕು ಎಂದು ಕಂಡ ಮೇಲೆ ಅಲ್ಲೇ ನಿಲ್ಲುವ ವ್ಯಕ್ತಿಯು ಇವರಲ್ಲ. ಆದರೆ ನಾರಾವಿಯ ಪ್ರೋತ್ಸಾಹವು ಇದಕ್ಕೆ ಹೆಚ್ಚು ಕಂಡು ಬರಲಿಲ್ಲ. ಹೈಸ್ಕೂಲಿನ ಆಲೋಚನೆಯನ್ನು ಕಂಡ ನಾರಾವಿಯ ಜನರು ನಕ್ಕರು. ಆದರೆ ಒಂದು ರೀತಿಯಲ್ಲಿ ಅವರ ನಗುವು ಸ್ವಾಭಾವಿಕವಾಗಿತ್ತು. ಹೈಸ್ಕೂಲೆಂದರೆ ಅದೇನು ಸಾಮಾನ್ಯ ಒಂದು ಕಟ್ಟಡ ಮಾತ್ರವಲ್ಲ, ಅದಕ್ಕೆ ಬೇಕಾದ ಫರ್ನಿಚರ್ಸ್, ಲೆಬೋರೇಟರಿ, ಆಟದ ಬಯಲು ಈ ಎಲ್ಲಾ ಖರ್ಚುಗಳನ್ನು ಯಾರು ತಾನೆ ಮಾಡಬಲ್ಲರು. ಅದೂ ಇಂತಹ ಹಳ್ಳಿಯಲ್ಲಿ! ಆದರೆ ಸಂತ ಅಂತೋನಿಯವರಲ್ಲಿ ತಮ್ಮ ಭರವಸೆಯನ್ನಿಟ್ಟು ಫಾದರ್ ಫೆರ್ನಾಂಡಿಸರು ಇದು ಸಾಧ್ಯ ಎಂಬುದನ್ನು ತೋರಿಸಿಯೇ ಕೊಟ್ಟರು. 15-06-1966ರಂದು ಬಿಶಪ್ ಬೇಸಿಲ್ ಡಿ’ಸೋಜರಿಂದ ಹೈಸ್ಕೂಲಿನ ಉದ್ಘಾಟನೆಯಾಗಿ 8 ಕ್ಲಾಸುಗಳು ಎಲಿಮೆಂಟರಿ ಶಾಲೆಯ ಕಟ್ಟಡದಲ್ಲೇ ನಡೆಯಿತು. ಮರುವರುಷ 9ನೇ ಕ್ಲಾಸು ಆಗಿ ಒಳ್ಳೆಯ ಸಂಖ್ಯೆಯಿಂದ ಮತ್ತು ಒಳ್ಳೆಯ ರೀತಿಯಿಂದ ಮುಂದುವರಿಯಿತು.
19-01-1967ರಂದು ಕಾರ್ಡಿನಲ್ ವಲೇರಿಯನ್ನ ಗ್ರೇಸಿಯಸರಿಂದ ಹೈಸ್ಕೂಲ್ ಕಟ್ಟಡದ ಬುನಾದಿಯನ್ನು ಹಾಕಲಾಯ್ತು. ನಾರಾವಿಯಲ್ಲಿ ಕಾರ್ಡಿನಲ್ ಗ್ರೇಸಿಯಸರಂಥ ಮಹಾ ವ್ಯಕ್ತಿಯ ಸಂದರ್ಶನವು ನಾರಾವಿ ಚರಿತ್ರೆಯಲ್ಲಿಯೇ ಪ್ರಥಮ ಬಾರಿ ಎನ್ನಬಹುದು. ಕಟ್ಟಡದ ಕೆಲಸವೂ ಭರದಿಂದ ನಡೆಯಲಾರಂಭಿಸಿತು. ಮಳೆಗಾಲದಲ್ಲಿ ಸಾರಿಗೆ ಸಂಪರ್ಕವಿಲ್ಲದೆ ಅಂಡಮಾನಂತಿರುವ ಈ ನಾರಾವಿಯಲ್ಲಿ ಒಂದು ಕಟ್ಟಡಕ್ಕೆ ಬೇಕಾದ ಸಿಮೆಂಟು, ಕಬ್ಬಿಣ ಮತ್ತಿತರ ವಸ್ತುಗಳನ್ನು ತರುವುದರ ಕಷ್ಟ ಎಷ್ಟೆಂಬುವುದನ್ನು ಇಲ್ಲಿ ಊಹಿಸಬಹುದು. ಈ ಎಲ್ಲಾ ಸಮಸ್ಯೆಗಳನ್ನು ಎದುರಿಸಿ ಊರಿನ ಹಾಗೂ ಪರವೂರಿನ ಜನರ ಆರ್ತಿಕ ಸಹಾಯದಿಂದ ಹೈಸ್ಕೂಲಿಗೆ ಒಂದು ಭವ್ಯವಾದ ಹೈಸ್ಕೂಲ್ ಕಟ್ಟಡವನ್ನು ಕಟ್ಟಿಸಿದ ಕೀರ್ತಿಯು ಫಾದರ್ ಫೆರ್ನಾಂಡಿಸರಿಗೆ ಸಲ್ಲುತ್ತದೆ.
ಸಂಸ್ಥೆ ನಡೆದು ಬಂದ ದಾರಿ – ಒಂದು ಪಕ್ಷಿನೋಟ
“ಕಾಲಾಯ ತಸ್ಮಯೇ ನಮ:” ಎಂದರು ನಮ್ಮ ಹಿರಿಯರು. ಮಾನವ ಲೋಕದಲ್ಲಿ ನಡೆಯುವ ಕಾರ್ಯಾ- ಕಾರ್ಯಗಳಿಗೆ ನ್ಯಾಯಬದ್ಧವಾದ, ತಕ್ಕುದಾದ ತೀರ್ಪು ಕೊಡುವ ಪರಮಾಧಿಕಾರ ಕಾಲದ ಬಸಿರಲ್ಲಿ ಅವ್ಯಕ್ತವಾಗಿರುತ್ತದೆಂಬುದು ತ್ರಿಕಾಲಾಬಾಧಿತ ಸತ್ಯ. ಇಲ್ಲಿ ವಸೀಲಿ ನಡೆಯದು, ವಂಚನೆಯ ಸಂಚು ಫಲಕಾರಿಯಾಗದು. ಒಳಿತಿಗೆ ಒಳಿತು, ಕೆಡುಕಿಗೆ ಕೆಡುಕು- ಇದು ಕಾಲದ ಸಮುದ್ರ ಮಥನದಲ್ಲಿ ಅನುಗಾಲ ಎದ್ದು ಬಂದ ನಿರ್ಣಾಯಕ ತೀರ್ಪುಗಳು. ಒಳಿತನೆಸಗಿದರೆ ಕಾಲಾಂತರದಲ್ಲಿ ಅದರ ಸತ್ಫಲ ಭೃಹತ್ತಾಗಿ, ಮಹತ್ತಾಗಿ ಕಣ್ಮುಂದೆ ನಿಲ್ಲುತ್ತದೆ. ಸಮಾಜದಲ್ಲಿ ಇಂದು ನಾವು ಕಾಣುವ, ಅನುಭವಿಸುವ ಎಲ್ಲಾ ಬಗೆಯ ಉನ್ನತಿ ಸೌಲಭ್ಯಗಳ ಹಿಂದೆ ಹಲವರ ತ್ಯಾಗ ಸತ್ಕಾರ್ಯಗಳ ಬೆವರಿನ ಶ್ರಮವಿದೆ. ಇಂತಹ ತ್ಯಾಗದ ಅಮರ ಅಧ್ಯಾಯವೊಂದು ನಾರಾವಿಯಲ್ಲಿ ತೆರೆದುಕೊಂಡುದರ ಕಥೆ – ವ್ಯಥೆ ರೋಮಾಂಚಕಾರಿಯಾದುದು ರೋಚಕವಾದುದು. ಈ ಸಾಹಸ ಕಥೆಯ ನಾಂದಿ ಸುಮಾರು 1870ರಲ್ಲಿ ನಾರಾವಿಯಲ್ಲೊಂದು ಪ್ರಾರ್ಥನಾ ಮಂದಿರ ತೆರೆಯುವುದರೊಂದಿಗೆ ಆಯಿತು. ಅನಂತರ 1905ರಲ್ಲಿ ಇಲ್ಲಿಗೆ ಆಗಮಿಸಿದ ರೆ| ಫಾ| ಕೋರ್ಟಿಯವರ ಸಾಧನೆ, ಸಾಹಸ ತೀರ ನಿರ್ಲಕ್ಷಿತರಾದ ಹಿಂದುಳಿದ ಜನಾಂಗದವರ ಬದುಕಿಗೆ ನವಚೈತನ್ಯವನ್ನು ಆಶಾ ಕಿರಣವನ್ನು ನೀಡಿತು. ತಮ್ಮ 21 ವರ್ಷಗಳ ಸುದೀರ್ಘ ಸೇವೆಯಲ್ಲಿ ನಾರಾವಿಯ ಚರಿತ್ರೆಯಲ್ಲಿ ಅಮರರಾಗಿ ಉಳಿದವರು ಅವರು. ಅವರ ಅನಂತರ ಬಂದ ಧರ್ಮ ಗುರುಗಳು ನಾರಾವಿ ಚರ್ಚ್, ಅದರ ಮುಂಭಾಗದಲ್ಲಿ ಮಾವಿನ, ಹೂವಿನ ತೋಟ, ಸಂತ ಪಾವ್ಲರ ಪ್ರಾಥಮಿಕ ಶಾಲೆ, ಕನ್ಯಾಸ್ತ್ರೀಯರಿಗಾಗಿ ಒಂದು ಮನೆ – ಈ ಮೊದಲಾದ ಅಭಿವೃದ್ಧಿ ಕಾರ್ಯಗಳನ್ನು ಮಾಡಿ ಇಲ್ಲಿಯ ಪ್ರಗತಿಯಲ್ಲಿ ಗಣನೀಯ ಪಾತ್ರ ವಹಿಸಿದರು.
1953ರಲ್ಲಿ ನಾರಾವಿ ಧರ್ಮಕೇಂದ್ರದ ಧರ್ಮಗುರುಗಳಾಗಿ ಆಗಮಿಸಿದ ಫಾ| ಪಿ. ಎಫ್. ಫೆರ್ನಾಂಡಿಸರನ್ನು ನಾರಾವಿಯ ವಿಶ್ವೇಶ್ವರಯ್ಯನೆಂದು ಕರೆದರೆ ತಪ್ಪಿಲ್ಲ. ವಿಶ್ವೇಶ್ವರಯ್ಯನವರು ಆಧುನಿಕ ಮೈಸೂರಿನ ಶಿಲ್ಪಿಗಳು. ಫಾ| ಫೆರ್ನಾಂಡಿಸರು ನಾರಾವಿಯ ಆಧುನೀಕರಣಕ್ಕೆ ಅವರಷ್ಟೇ ನಿಷ್ಠೆಯಿಂದ ದೂರದರ್ಶಿತ್ವದಿಂದ ದುಡಿದವರು. 15-06-1966ರಲ್ಲಿ ಇಲ್ಲೊಂದು ಪ್ರೌಢಶಾಲೆ ನಿರ್ಮಿಸುವ ಪುಣ್ಯ ಕಾರ್ಯ ಅವರಿಂದ ನೆರವೇರಿತು. ನಾರಾವಿಯಲ್ಲಿ ಪ್ರೌಢಶಾಲೆಯೊಂದರ ಕಲ್ಪನೆ, ಅದಕ್ಕಾಗಿ ಸುಸಜ್ಜಿತ ಭವ್ಯ ಕಟ್ಟಡ ನಿರ್ಮಾಣದ ಗುರುತರ ಹೊಣೆಗಾರಿಕೆ, ಇದು ಆ ಕಾಳದಲ್ಲಿ ಅವರ ಶಕ್ತಿ ಸಾಮಥ್ರ್ಯಕ್ಕೆ ಸವಾಲಾಗಿ ನಿಂತ ಒಂದು ಸಾಹಸದ ಸಾಧನೆಯೇ ಸರಿ.
ಶತ ಶತಮಾನಗಳ ವರೆಗೆ ಬಾಳುವ ಅತ್ಯುತ್ತಮ ವಾಸ್ತುಶಿಲ್ಪ ಮಾದರಿಯ ಈ ವಿದ್ಯಾ ಮಂದಿರ ಫಾ| ಫೆರ್ನಾಂಡಿಸರ ಹೆಸರನ್ನು ಅಜರಾಮರಗೊಳಿಸುವ ಒಂದು ಶಾಶ್ವತ ಸ್ಮಾರಕ. ಭದ್ರವಾದ ವಿಶಾಲ ತರಗತಿ ಕೋಣೆಗಳನ್ನು ಹೊಂದಿದ ಸಕಲ ಪೀಠೋಪಕರಣ ಪಾಠೋಪಕರಣಗಳಿಂಒಡಗೂಡಿದ ಈ ವಿದ್ಯಾ ಮಂದಿರವನ್ನು ಶಿಕ್ಷಣ ಸೌಲಭ್ಯವು ದುರ್ಲಭವಾಗಿದ್ದ ಆ ಕಾಲದಲ್ಲಿ ಅತ್ಯಂತ ಹಿಂದುಳಿದಿದ್ದ ಈ ಊರಿಗೆ ಒದಗಿಸಿ ಕೊಡಲು ಫಾ| ಫೆರ್ನಾಂಡಿಸರು ತೋರಿದ ಸಾಹಸಗಾಥೆ ಅಭಿನಂದನೀಯವಾದುದು. ಈ ಸಂಸ್ಥೆಯ ಪ್ರಥಮ ಸಂಚಾಲಕರಾಗಿ ತಮ್ಮ ಸರ್ವಶಕ್ತಿಯನ್ನು ಇದರ ಪೋಷಣೆ ಬೆಳವಣಿಗೆಗೆ ಧಾರೆ ಎರೆದು ಶಿಕ್ಷಣ ಕ್ಷೇತ್ರದಲ್ಲಿ ಈ ಸಂಸ್ಥೆ ತನ್ನದೇ ಆದ ಸಾಧನೆ ವೈಶಿಷ್ಟ್ಯಗಳನ್ನು ತೋರಿಸಲು ಮೂಲ ಪ್ರೇರಕರಾದವರು ಫಾ| ಫೆರ್ನಾಂಡಿಸರೆಂಬುದನ್ನು ಮರೆಯಲು ಸಾಧ್ಯವಿಲ್ಲ. ಅನಂತರ ಈ ಸಂಸ್ಥೆಯ ಸಂಚಾಲಕರಾಗಿ ಬಂದ ಫಾ| ಥೋಮಸ್ ಡಿ’ಸೋಜ, ಫಾ| ವಲೇರಿಯನ್ ಪಿಂಟೊ ಇವರೂ ತಮ್ಮ ದೀರ್ಘ ಕಾಲದ ಆಡಳಿತಾವಧಿಯಲ್ಲಿ ಈ ಸಂಸ್ಥೆಯ ಸರ್ವತೋಮುಖ ಬೆಳವಣಿಗೆಯಲ್ಲಿ ನಿರ್ಣಾಯಕ ಶಕ್ತಿಗಳಾಗಿ ದುಡಿದವರು. ಪ್ರಕೃತ ಫಾ| ರೊಜಾರಿಯೊ ಫೆರ್ನಾಂಡಿಸ್ ಅವರು ಈ ಶಾಲೆಯ ಸಂಚಾಲಕರಾಗಿ ದುಡಿಯುತ್ತಿದ್ದಾರೆ. ಈ ಪ್ರೌಢಶಾಲೆಯ ಪ್ರಥಮ ಮುಖ್ಯೋಪಾಧ್ಯಾಯಿನಿಯಾಗಿ ಸೇವೆ ಸಲ್ಲಿಸಿದವರು ಶ್ರೀಮತಿ ಮೀರಿಯಮ್ ಲೂವಿಸ್ ಅವರು. ಅನಂತರ ಸಿ| ಒಲಿಂಪಿಯಾ, ಸಿ| ಜಿಸೆಲ್ಲಾ, ಸಿ| ಲಿಲ್ಲಿಯಾ, ಸಿ| ಲಾವ್ರ, ಸಿ| ಜೊಸೆಫಿನ್ – ಈ ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿಯರಾಗಿ ಇದರ ಸರ್ವತೋಮುಖ ಏಳಿಗೆಗೆ ಕಾರಣರಾಗಿದ್ದಾರೆ. ಈಗ ಮತ್ತೆ ಸಿ| ಒಲಿಂಪಿಯಾ ಅವರು ಇದರ ಮುಖ್ಯೋಪಾಧ್ಯಾಯಿನಿಯಾಗಿ ತಮ್ಮ ಕತವ್ಯ ನಿರ್ವಹಿಸುತ್ತಿದ್ದಾರೆ.
1966ರಲ್ಲಿ ಈ ಊರಿನಲ್ಲಿ ಫಾ| ಫೆರ್ನಾಂಡಿಸರು ಬೆಳಗಿಸಿದ ಈ ನಂದಾದೀಪ, ಈ ಜ್ಞಾನದೇಗುಲ ತನ್ನ 50 ಸಂವತ್ಸರಗಳ ಸಾರ್ಥಕ ಬದುಕನ್ನು ಇದೀಗ ಪೂರೈಸುವ ಹೊಸ್ತಿಲಲ್ಲಿದೆ. ಇದರಿಂದ ತಮ್ಮ ಕಿರು ಹಣತೆಯನ್ನು ಬೆಳಗಿಸಿಕೊಂದು ಜಗಜ್ಜ್ಯೋತಿಯಾಗಿ ಮಾಡಿಕೊಂಡ ಸಹಸ್ರೋಪ ಸಹಸ್ರ ಮಂದಿ ವಿದೇಶಗಳಲ್ಲಿ ಇದ್ದಾರೆ. ಅತ್ಯುತ್ತಮ ಶೈಕ್ಷಣಿಕ ದಾಖಲೆಗಳೊಂದಿಗೆ ಕ್ರೀಡೆ, ಕಲೆ, ಸಂಗೀತ, ಸಾಹಿತ್ಯಾದಿಗಳಿಂದ ಬದುಕಿನ ಸರ್ವಾಂಗೀಣ ವಿಕಾಸಕ್ಕೆ ಈ ವಿದ್ಯಾ ಮಂದಿರ ಅಸಾಧಾರಣ ಕೊಡುಗೆಯನ್ನು ಕೊಟ್ಟಿದೆ. ಕಲಿಕೆಗೆ ಬೇಕಾದ ಎಲ್ಲಾ ಬಗೆಯ ಉತ್ತಮ ಪರಿಸರವನ್ನು ಈ ಸಂಸ್ಥೆ ಹೊಂದಿದೆ. ದೂರದಿಂದ ಬರುವವರಿಗೆ ಉಚಿತ ವಿದ್ಯಾರ್ಥಿ ನಿಲಯದ ಸೌಲಭ್ಯವಿದೆ. ಪ್ರಕೃತ ಈ ಸಂಸ್ಥೆಯಲ್ಲಿ 7 ತರಗತಿಗಳಿದ್ದು 346 ಮಂದಿ ವಿದ್ಯಾರ್ಥಿ ವಿದ್ಯಾರ್ಥಿನಿಯರು ವ್ಯಾಸಂಗ ಮಾಡುತ್ತಿದ್ದಾರೆ. ಮುಖ್ಯೋಪಾಧ್ಯಾಯಿನಿ, 10 ಮಂದಿ ಶಿಕ್ಷಕರು, 6 ಮಂದಿ ಶಿಕ್ಷಕೇತರ ಸಿಬ್ಬಂದಿಗಳು ಇಲ್ಲಿ ದುಡಿಯುತ್ತಿದ್ದಾರೆ. ಗ್ರಾಮಾಂತರ ಪ್ರದೇಶದಲ್ಲಿ ಮೈದಳೆದು ನಿಂತ ಈ ವಿದ್ಯಾ ಮಂದಿರವು ಪ್ರಾಥಮಿಕ ಹಂತದಲ್ಲೇ ಶಿಕ್ಷಣವು ಮೊಟಕಾಗುತ್ತಿದ್ದ ಎಷ್ಟೋ ಗ್ರಾಮೀಣ ಪರಿಸರದ ಬಡಮಕ್ಕಳಿಗೆ ಒಂದು ವರದಾನವಾಗಿ ಪರಿಣಮಿಸಿದೆ – ಎಂಬುದು ಮರೆಯಲಾರದ ಸತ್ಯ. ಸಂಸ್ಥೆ ಬೆಳೆದಂತೆ ಅದರ ಅವಶ್ಯಕತೆಗಳು ಹೆಚ್ಚುತ್ತವೆ. ಈಗಾಗಲೇ ಉತ್ತಮ ಕ್ರೀಡಾಂಗಣ, ಶಿಕ್ಷಕರಿಗೆ ವಸತಿಗೃಹ, ಸೈಕಲ್‍ನಲ್ಲಿ ಬರುವ ವಿದ್ಯಾರ್ಥಿಗಳಿಗಾಗಿ ಒಂದು ವಿಶಾಲವಾದ ಸೈಕಲ್ ಸ್ಟೇಂಡ್ ಇವೆಲ್ಲವನ್ನು ಈ ಸಂಸ್ಥೆ ಹೊಂದಿದೆ.